ಯತಿ ಸ್ವಂತೀ -18
18-1-2018
ನಮ್ಮ ತಾಯ್ತಂದೆಗೆ ನಾವು ಮೂವರು ಮಕ್ಕಳು. ನನ್ನ ಮತ್ತು ನನ್ನ ದೊಡ್ಡ ತಂಗಿ ನಡುವೆ ವಯಸ್ಸಿನ ವ್ಯತ್ಯಾಸ ಕೇವಲ ಒಂದೂವರೆ ವರ್ಷಗಳು. ಆ ನಂತರ ನನ್ನ ಎರಡನೆಯ ತಂಗಿ ಹುಟ್ಟಿದ್ದು ನನಗೆ ಹತ್ತು ವರ್ಷಗಳಾಗಿದ್ದಾಗ.
ನನಗೂ, ನನ್ನ ದೊಡ್ಡ ತಂಗಿಗೂ ನಮ್ಮ ಚಿಕ್ಕ ತಂಗಿ ಎಂದರೆ ಒಂದು ಜೀವಂತ ಗೊಂಬೆ! ಸದಾ ಅವಳನ್ನು ಆಟವಾಡಿಸುವುದು (ಮತ್ತು ಗೋಳು ಹುಯ್ದುಕೊಳ್ಳುವುದು!) ನಮ್ಮ ಅತ್ಯಂತ ಒಳ್ಳೆಯ ಟೈಮ್‍ಪಾಸ್.
ಅವಳನ್ನು ದುಪ್ಪಟಿಯ ಮೇಲೆ ಮಲಗಿಸಿ ಜೋರಾಗಿ ತೊಟ್ಟಿಲಿನಂತೆ ತೂಗುತ್ತಿದ್ದೆವು. ಅವಳು ನಕ್ಕರೆ ಓಕೆ. ಅವಳು ಅತ್ತರೆ ಅಮ್ಮ ಬಂದು ನಮ್ಮಿಬ್ಬರನ್ನೂ ಗದರಿಸಿ ಅವಳನ್ನೆತ್ತಿಕೊಂಡು ಸಮಾಧಾನ ಮಾಡುತ್ತಿದ್ದರು.
ಅವಳಿಗೆ ಸುಮಾರು ಹತ್ತು ತಿಂಗಳಾಗುವ ವೇಳೆಗೆ ನಾಲ್ಕು ಹಲ್ಲುಗಳು ಬಂದಿದ್ದವು. ದಷ್ಟಪುಷ್ಟವಾಗಿ ಬಲು ಮುದ್ದಾಗಿದ್ದಳು.
ನಾವಿದ್ದ ರೈಲ್ವೇ ಕಾಲೋನಿಯಲ್ಲಿ ಒಮ್ಮೆ ಬೇಬಿ ಷೋ ಸ್ಪರ್ಧೆ ಇದೆಯೆಂದು ತಿಳಿಯಿತು. ಅಮ್ಮ ಎಲ್ಲೋ ಕೆಲಸದಲ್ಲಿ ನಿರತರಾಗಿದ್ದಾಗ ನಾನು, ನನ್ನ ದೊಡ್ಡ ತಂಗಿ ಮೆಲ್ಲನೆ ನಮ್ಮ ಚಿಕ್ಕ ತಂಗಿಯನ್ನು ಎತ್ತಿಕೊಂಡು ಸ್ಪರ್ಧೆ ನಡೆಯುತ್ತಿದ್ದ ಸ್ಥಳಕ್ಕೆ ನಡೆದೆವು. ಅಮ್ಮ, ಅಪ್ಪನ ಹೆಸರು, ಅವಳ ಹೆಸರು ನೀಡಿ ಜಡ್ಜ್‍ಗಳು ಅವಳನ್ನು ನೋಡುವವರೆಗೂ ಅಲ್ಲಿದ್ದು, ನಂತರ ಅವಳನ್ನೆತ್ತಿಕೊಂಡು ಮನೆಗೆ ಬಂದುಬಿಟ್ಟೆವು.
ಸಂಜೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗುವಾಗ ಅಮ್ಮನನ್ನೂ, ಅಪ್ಪನನ್ನೂ ಬಲವಂತವಾಗಿ ಕರೆದೊಯ್ದೆವು. ನಮ್ಮ ಪುಟ್ಟ ತಂಗಿ ಪ್ರಥಮ ಬಹುಮಾನ ಪಡೆದಿದ್ದಳು! ಒಂದು ಸೀಮೆಣ್ಣೆ ಸ್ಟೌ. ಉಮ್ರಾವ್ ಎಂದು ಅದರ ಹೆಸರು.
ಅಲ್ಲಿಯ ವರೆಗೆ ನನಗೆ ನೆನಪಿರುವ ಮಟ್ಟಿಗೆ ಕೇವಲ ಇದ್ದಿಲ ಒಲೆ ನಮ್ಮ ಮನೆಯಲ್ಲಿತ್ತು. ಮಣ್ಣಿನಲ್ಲಿ ಮಾಡಿದ ಜೋಡಿ ಒಲೆಗಳು. ಅಮ್ಮ ಅವುಗಳ ಮೇಲೆ ಆಗಾಗ ಕೆಮ್ಮಣ್ಣನ್ನು ಸಾರಿಸುತ್ತಿದ್ದರು. ಈಗ ಸೀಮೆಣ್ಣೆ ಕೊಂಡುಕೊಳ್ಳುವ ಸಮಯ ಬಂದಿತ್ತು!
ಈ ಸ್ಪರ್ಧೆಯ ಸೈಡ್ ಎಫೆಕ್ಟ್ ಎಂದರೆ ನನ್ನ ಪುಟ್ಟ ತಂಗಿ ಅಂದಿನಿಂದಲೇ ಹುಷಾರು ತಪ್ಪಿದ್ದಳು. ದೃಷ್ಟಿ ಆಗಿರಬಹುದು ಎಂದರು ಅನೇಕರು. ಬಡವಾಗಿಹೋದಳು ಪಾಪ!
ಸೀಮೆ ಎಣ್ಣೆಗೆ ಒಂದು ಕಾಲದಲ್ಲಿ ರೇಷನ್ ಬಂದಿತ್ತು. ಅದು 1973 ಎಂದು ನೆನಪು. ಮೊದಲ ಪಿಯುಸಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಮುಗಿಸಿ ರಜೆಯಲ್ಲಿ ಮೈಸೂರಿಗೆ ಅಮ್ಮನ ಮನೆಗೆ ಬಂದಿದ್ದೆ. ಮನೆಯಲ್ಲಿ ಅಡುಗೆಗೆ ಸೀಮೆ ಎಣ್ಣೆ ಬೇಕು. ಆದರೆ ಅದಕ್ಕೆ ಕ್ಯೂ. ಎರಡು ಮೂರು ಪಾಯಿಂಟುಗಳಿದ್ದವು. ಅಲ್ಲಿ ನಮ್ಮ ಮನೆಯ ಗುರುತಾಗಿ ಒಂದು ಕಲ್ಲನ್ನು ಕ್ಯೂನಲ್ಲಿ ಇಡುತ್ತಿದ್ದೆ. ಏಕೆಂದರೆ ಡಬ್ಬ ಇಟ್ಟರೆ ಅದು ಕಳ್ಳತನ ಆಗಬಹುದಿತ್ತು!
ಒಮ್ಮೊಮ್ಮೆ ಒಂದು ಕಡೆ ನಿಂತಾಗ ಮತ್ತೊಂದು ಕಡೆ ಕೊಡುತ್ತಿದ್ದಾರೆಂಬ ಸುದ್ದಿ ಬರುತ್ತಿತ್ತು. ಮೊಬೈಲ್ ಇರಲಿ, ಲ್ಯಾಂಡ್‍ಲೈನ್ ಕೂಡ ಇಲ್ಲದ ಕಾಲ ಅದು. ವರ್ಡ್ ಆಫ್ ಮೌತ್ ಎನ್ನುವಂತೆ ಬಾಯಿ – ಕಿವಿ- ಬಾಯಿ... ಹೀಗೆ ಹರಡುತ್ತಿದ್ದವು ಸುದ್ದಿಗಳು.
ಆ ಸೀಮೆ ಎಣ್ಣೆ ಮಾರುವಾತ ಕೂಡ ಎಂತಹ ಚಾಕಚಕ್ಯತೆ ಉಳ್ಳವನಾಗಿದ್ದನೆಂದರೆ ನಾಲ್ಕೂವರೆ ಲೀಟರ್ ಡಬ್ಬದಲ್ಲಿ ನಮಗೆ ಆರು ಲೀಟರ್ ಸೀಮೆಣ್ಣೆ ಕೊಡುತ್ತಿದ್ದ.
ಬಾಯಿ ಯಾರಿಗಿತ್ತು ಅವನನ್ನು ದಬಾಯಿಸಲು?
Comments
Post a Comment