ಯತಿ ಸ್ವಂತೀ -17
17-1-2018
ನನ್ನ ಸೋದರತ್ತೆಯ ಮಕ್ಕಳಲ್ಲಿ ನನಗೆ ಬಹಳ ಇಷ್ಟವಾದವರು ಅನೇಕ. ನನ್ನ ತಂದೆಯವರಿಗೆ ಐವರು ತಂಗಿಯರು. ಏಳು ಜನ ಹೆಣ್ಣು ಕಸಿನ್‍ಗಳು, ಆರು ಗಂಡು ಕಸಿನ್‍ಗಳಿದ್ದಾರೆ.
ಕೇವಲ ಇಬ್ಬರು ಗಂಡು ಕಸಿನ್‍ಗಳು ಮಾತ್ರ ನನಗಿಂತ ಚಿಕ್ಕವರು. ಇವರಲ್ಲಿ ಯಾರು ಮನೆಗೆ ಬಂದರೂ ನನಗೂ ನನ್ನ ತಂಗಿಗೂ ಬಹಳ ಖುಷಿ. ಅಬ್ಬಾ! ಕೆಲವು ದಿನ ಚೆನ್ನಾಗಿರುತ್ತದೆ ಎಂದುಕೊಳ್ಳುತ್ತಿದ್ದೆವು.
ಅದರಲ್ಲಿ ಒಬ್ಬಳು ನಮಗೆ ಕಥೆ ಹೇಳುತ್ತಿದ್ದಳು. ಶರ್ಮೀಲೀ ಚಿತ್ರವನ್ನು ಆಗ ನೋಡಲಾಗದಿದ್ದ ವ್ಯಥೆಯನ್ನು ಇವಳು ಅದರ ಇಡೀ ಕಥೆಯನ್ನು ಹೇಳಿ ತುಂಬಿಕೊಟ್ಟಳು!
ಅವಳು ಮೈಸೂರಿಗೆ ನಮ್ಮ ಮನೆಗೆ ಬಂದಾಗ ನೋಡಿದ ಎರಡು ಸಿನಿಮಾಗಳ ಕಥೆ ಹೇಳಿದ್ದು ಇಂದಿಗೂ ನೆನಪಿದೆ. ಸುರುಳಿರಾಜನ್ ಮನೋರಮಾ ಅಭಿನಯದ ಕಣ್‍ಕಾಚ್ಚಿ ಮತ್ತು ಜ್ಯೋತಿಲಕ್ಷ್ಮಿ ಅಭಿನಯದ ಒಕ ನಾರಿ ವಂದ ತುಪಾಕುಲು. ಈ ಚಿತ್ರಗಳ ಇಡೀ ಕಥೆಯನ್ನು ಬಿಡಿಸಿ ನಿಧಾನವಾಗಿ, ಸ್ವಾರಸ್ಯವಾಗಿ ಹೇಳಿದ್ದಳು.
ಅವಳೊಬ್ಬ ಕಲಾವಿದೆ. ಕೈಯಲ್ಲಿ ಎಂತಹ ಕುಸುರಿ ಕೆಲಸ ಮಾಡಬಲ್ಲಳೆಂದು ನೋಡಲು ಅವಳು ಮಾಡಿರುವ ಕೆಲವು ಕ್ರಿಯೆಗಳನ್ನು ನೋಡಬೇಕು. ಪ್ರತಿ ವರ್ಷ ಜನವರಿಯಲ್ಲಿ ಅವಳ ತಾಯಿಯ ಮನೆಗೆ ಮಲ್ಲೇಶ್ವರಂ ಶ್ರೀಕೃಷ್ಣ ದೇವಾಲಯದಿಂದ ಉತ್ಸವಮೂರ್ತಿ ಬಂದು, ಇವರ ಮನೆಯ ಮುಂದೆ ಅಲಂಕಾರಗೊಳ್ಳುತ್ತದೆ. ಒಳಗೆ ಏನಾದರೊಂದು ಯಕ್ಷಿಣಿ ಮಾಡಿರುತ್ತಾಳೆ. ಕೊಬ್ಬರಿ ಅಥವಾ ಚಿನ್ನಾರಿ ಅಥವಾ ಇನ್ಯಾವುದರಲ್ಲಾದರೂ ವಿಶೇಷವಾದ ಕೃಷ್ಣ ಸಂಬಂಧೀ ಘಟನೆಯನ್ನು ಸಿದ್ಧಗೊಳಿಸಿರುತ್ತಾಳೆ. ಗಾಜಿನ ಮೇಲೆ ಅವಳು ಮಾಡಿರುವ ರಾಘವೇಂದ್ರಸ್ವಾಮಿ, ವೆಂಕಟೇಶ್ವರ ಎಲ್ಲವೂ ಅದ್ಭುತ.
ಬಹಳ ಚೆನ್ನಾಗಿ ಮಾತಾಡುತ್ತಾಳೆ. ಅವಳು ಹಾಕುವ ಉಪ್ಪಿನಕಾಯಿಯನ್ನು ಮರೆಯದೇ ಕೇಳಿ ಪಡೆಯುತ್ತೇನೆ. ‘ನಾಚಿಕೆ, ಸಂಕೋಚ ಇಲ್ಲ ನಿನಗೆ’ ಎಂದು ಎಲ್ಲರೂ ರೇಗಿಸುತ್ತಾರೆ, ಅವಳೊಬ್ಬಳನ್ನು ಬಿಟ್ಟು!
ನನ್ನ ಸರತಿ ಈಗ. ನನ್ನ ಕಾದಂಬರಿಗಳಲ್ಲಿ ಬಹಳಷ್ಟನ್ನು ಓದಿದ್ದಾಳೆ. ಬಹಳ ಇಷ್ಟ ಪಟ್ಟಿದ್ದಾಳೆ. ಚಿರಸ್ಮಿತ ಕಾದಂಬರಿ ಕೊಟ್ಟು, ನಂತರ ಮರಳಿ ಪಡೆದೆ. ಏಕೆಂದರೆ ಆಗ ನನ್ನ ಬಳಿ ಇದ್ದಿದ್ದು ಒಂದು ಪ್ರತಿ. ನನ್ನ ತಂಗಿಗೆ ಕೊಡಬೇಕಿತ್ತು. ಅವಳು ಅದನ್ನು ಕೂಲಂಕಷವಾಗಿ ಓದಿ, ಅದರ ಕೆಲವು ಪುಟಗಳು ಮತ್ತೆ ಮತ್ತೆ ಓದಲು ಅರ್ಹವಾಗಿವೆ ಎಂದು ಫೋಟೋಕಾಪಿ ಮಾಡಿಟ್ಟುಕೊಂಡಿದ್ದಾಳಂತೆ!
ಕಳೆದ ವರ್ಷ ನನ್ನ ಬೇಹು ಕಾದಂಬರಿ ಮಂಗಳದಲ್ಲಿ ಧಾರಾವಾಹಿ ಆಯಿತು. ಅದೊಂದು ನಲವತ್ತೆಂಟು ವಾರಗಳ ಧಾರಾವಾಹಿ. ಪ್ರತಿ ಗುರುವಾರ ಪತ್ರಿಕೆ ಮಾರುವವನ ಅಂಗಡಿಗೆ ಹೋಗಿ ಮನೆಗೆ ತಂದು ಓದಿ ಖುಷಿ ಪಟ್ಟಳಂತೆ. ಯತಿರಾಜ್, ತುಂಬಾ ಚೆನ್ನಾಗಿದೆ ಕಣೋ. ಆ ಹೀರೋ ಸುಕಾಂತನ ಗತಿ ಏನಾಗುವುದೋ ಅಂತ ಪ್ರತಿ ವಾರ ಹೆದರ್ತಿದ್ದೆ ಅಂತ ಮಧ್ಯೆ ಒಂದು ದಿನ ಸಮಾರಂಭವೊಂದರಲ್ಲಿ ಸಿಕ್ಕಾಗ ಹೇಳಿದಳು. ಎಷ್ಟು ಖುಷಿ ಆಯಿತೂಂತೀರಿ!
ಚಿಕ್ಕಂದಿನಲ್ಲಿ ನನಗೆ ಕಥೆ ಹೇಳುತ್ತಿದ್ದವಳಿಗೆ ನಾನು ಕಥೆ ಹೇಳುವುದು... ಅದೂ ಕಂತಿನಲ್ಲಿ! ಸೂರ್ಯನಿಗೇ ಟಾರ್ಚ್!
Comments
Post a Comment