ಯತಿ ಸ್ವಂತೀ -16
16-1-2018
ನಿಮಗೆ ಏನೇನೋ ವಿಷಯ ಹೇಳಬೇಕು ಎಂದು ಅಂದುಕೊಳ್ಳುತ್ತಿರುತ್ತೇನೆ. ಆದರೆ ಬರೆಯಲು ಕೂತಾಗ ಅನೇಕ ಸಂಗತಿಗಳು ನೆನಪಿಗೇ ಬರುವುದಿಲ್ಲ. ವಯಸ್ಸಾಯ್ತಲ್ಲ!
ಕೆಲವೊಮ್ಮೆ ನನ್ನ ವೃತ್ತಿ, ಪ್ರವೃತ್ತಿ ಮತ್ತು ನಿವೃತ್ತಿ ಜೀವನಗಳನ್ನು ನೆನೆಸಿಕೊಂಡರೆ ಅಚ್ಚರಿ ಎನಿಸುತ್ತದೆ. 1980ರಿಂದ ಸರಿಸುಮಾರು 2015ರ ವರೆಗೆ ನಿಲುಗಡೆರಹಿತ ಉದ್ಯೋಗ. ಹ್ಞಾಂ... 2001ರ ಜನವರಿಯಿಂದ 2002 ಜೂನ್ ವರೆಗೆ ನನ್ನ ಬದುಕಿನ ಬವಣೆಯ ಕಾಲ. ಹಣವಿಲ್ಲ, ಕೆಲಸವಿಲ್ಲ, ಸಮಯ ಹೋಗುತ್ತಿರಲಿಲ್ಲ, ಮನೆಯಲ್ಲಿ ನನ್ನನ್ನೂ ಸೇರಿ ಐದು ಜನ ಸದಸ್ಯರು!
ಅಬ್ಬಾ! ಒಂದು ರೀತಿಯ ಪರೀಕ್ಷಾ ಕಾಲವದು.
ಬರೆಯುವ ಅಭ್ಯಾಸ ನನ್ನನ್ನು ಅಂಟಿಕೊಂಡಿದ್ದು 89ರಲ್ಲಿ. ಅದಕ್ಕೆ ಮುಂಚೆ ನಮ್ಮ ಅಖಿಲ ಭಾರತ ಪ್ರವಾಸ ಮತ್ತು ನನ್ನ ಗೋಣಿಬೀಡು ಭೇಟಿಯ ಬಗ್ಗೆ ಗೀಚಿದ್ದು ನೆನಪಿದೆ.
ಮಿನಿ ಕಾದಂಬರಿಯೊಂದನ್ನು ಬರೆದು ಎರಡು ವರ್ಷಗಳ ನಂತರ ಧೈರ್ಯ ಮಾಡಿ ನನ್ನ ತಂಗಿಗೆ ಕೊಟ್ಟೆ. ಅವಳು ಓದಿ ಒಪ್ಪಿದ ಮೇಲೆ ಪತ್ರಿಕೆಯೊಂದಕ್ಕೆ ಕೊಟ್ಟೆ.
ಕಥೆ ಚೆನ್ನಾಗಿತ್ತೆಂದೋ ಅಥವಾ ನನ್ನಿಂದ ಅವರಿಗೆ ಒಂದು ಚಿಕ್ಕ ಸಹಾಯವಾಯಿತೆಂದೋ ನನ್ನ ‘ನಿರೀಕ್ಷೆ’ ಪ್ರಕಟವಾಗಿ ಕಥೆಗಾರನಾಗುವ ನನ್ನ ನಿರೀಕ್ಷೆಯನ್ನು ಸಫಲ ಮಾಡಿತು.
ಆಮೇಲೆ ಕಂಡಿದ್ದೆಲ್ಲಾ ಕಥೆಗಳೇ.
ಒಮ್ಮೆ ಅಂಗಡಿಗೆ ಹೋಗಿ ಮಂಗಳವನ್ನು ತಿರುಗಿಸಿ ನೋಡಿ ಖುಷಿಯಿಂದ ಮೂರ್ಛೆ ಹೋಗುವವನಿದ್ದೆ. ನನ್ನ ಕಥೆ ವಿಪರ್ಯಾಸ ಅದರಲ್ಲಿ ಪ್ರಕಟವಾಗಿತ್ತು. ಆಗೆಲ್ಲಾ ನಾನು ಎಂ.ವಿ.ಯತಿರಾಜ್.
ಮನೆಗೆ ಬಂದು ನನ್ನ ಪತ್ನಿಗೆ ಇಲ್ಲಿ ನೋಡು ಎಂದು ಮಂಗಳ ಪತ್ರಿಕೆ ಅವಳೆದುರಿಗೆ ಆಡಿಸಿದಾಗ ಅವಳು ಇಲ್ಲಿ ನೋಡಿ ಎಂದು ಉಷಾ ಪತ್ರಿಕೆಯನ್ನು ತೋರಿಸಿದಳು. ಅದರಲ್ಲೂ ನನ್ನದೊಂದು ಕಥೆ ಸ್ವಾತಂತ್ರ್ಯ!
ಎಂತಹ ಕಾಕತಾಳೀಯ ಸಂತಸ!
ನಂತರ ರಾಗಸಂಗಮದಲ್ಲಿ, ಮತ್ತು ಅವರದೇ ಆದ ಧಾರಾವಾಹಿ ಎನ್ನುವ ಪತ್ರಿಕೆಯಲ್ಲಿ ಬಹಳವೇ ಕಥೆಗಳು ಬಂದವು.
ಚಿಕ್ಕ ಚಿಕ್ಕ ಕಥೆಗಳು, ಓ ಹೆನ್ರಿಯಂತೆ ಕೊನೆಯನ್ನು ಟ್ವಿಸ್ಟ್ ಮಾಡಿ ಬಿಡುವ ಕಥೆಗಳು.
ಸಾಹಿರ್ ಲೂಧಿಯಾನ್ವಿ ಅವರು ಬರೆದ ಒಂದು ಕವಿತೆಯನ್ನು ಗುಮ್‍ರಾಹ್ ಚಿತ್ರಕ್ಕೆ ಮಹೇಂದ್ರ ಕಪೂರ್ ಬಹಳವೇ ಸೊಗಸಾಗಿ ಹಾಡಿರುವ ಗೀತೆ.
ಅದರಲ್ಲಿ ಒಂದು ಸಾಲು ಹೀಗಿದೆ: ವೋ ಅಫ್‍ಸಾನಾ ಜಿಸೆ ಅಂಜಾಮ್ ತಕ್ ಲಾನಾ ನ ಹೋ ಮುಮ್‍ಕಿನ್ ಉಸೆ ಇಕ್ ಖೂಬ್‍ಸೂರತ್ ಮೋಡ್ ದೇಕರ್ ಛೋಡನಾ ಅಚ್ಛಾ...
ಅಬ್ಬಾ... ಎಂತಹ ಸುಂದರ ಸಾಲು... ಬದುಕಿನ ನಮ್ಮ ಅತಿಥಿಗಳಿಗೂ ಅಳವಡಿಸಿಕೊಳ್ಳಬಹುದಾದ ಶಬ್ದಗಳು.
ನಮ್ಮ ಜೀವನದಲ್ಲಿ ನಮ್ಮನ್ನು ಭೇಟಿಯಾಗುವ ಜನರು ಬಹಳ. ಅವರಲ್ಲಿ ಕೆಲವರು ಮನೆಗೆ ಹತ್ತಿರವಾಗಿ, ಕೆಲವರು ಮನಸ್ಸಿಗೆ ಸನಿಹವಾಗುತ್ತಾರೆ.
ಅವರ ಜೊತೆ ನಮ್ಮ ಸ್ನೇಹ ಸಂಬಂಧಗಳು ಪರಸ್ಪರ ಒಳ್ಳೆಯ ಹಾದಿಯಲ್ಲಿ ಮುಂದುವರಿಯದಿದ್ದಲ್ಲಿ, ಆ ಸಂಬಂಧವನ್ನು ತ್ಯಜಿಸುವುದೇ ಮೇಲು.
ಯಾವ ಕಥೆಗೆ ಅಂತ್ಯದ ವರೆಗೆ ತರಲು ಸಾಧ್ಯವಾಗುವುದಿಲ್ಲವೋ ಆ ಕಥೆಗೆ ಒಂದು ಸುಂದರ ತಿರುವು ನೀಡಿ ಬಿಟ್ಟುಬಿಡಬೇಕು... ನಿಜಕ್ಕೂ ಹ್ಯಾಟ್ಸಾಫ್... ಸಾಹಿರ್‍ಜೀ.
Comments
Post a Comment