ಯತಿ ಸ್ವಂತೀ - 15


15-1-2018
ನಾಲ್ಕು ದಿನಗಳ ಹಿಂದೆ ಪಾರ್ಕ್‍ಗೆ ಎಂದಿನಂತೆ ವಾಕಿಂಗ್‍ಗೆ ಹೋದಾಗ ನಮ್ಮ ವಾರ್ಡ್‍ನ ಕಾರ್ಪೋರೇಟರ್ ಪಾರ್ಕ್‍ನಲ್ಲಿ ಕಸರತ್ತು ಮಾಡುತ್ತಿದ್ದ ಪುರುಷರೊಂದಿಗೆ ಮಾತಾಡುತ್ತಿದ್ದರು. ನಾನು ನನ್ನ ಪಾಡಿಗೆ ನನ್ನ ರೌಂಡು ಹೋದೆ. ನಂತರ ಪಾರ್ಕಿನ ಮತ್ತೊಂದು ಬದಿಗೆ ಬಂದಾಗ ಎದುರಿಗೆ ಬಂದ ಕಾರ್ಪೋರೇಟರ್ ಅಲ್ಲಿನ ಮಂಟಪವೊಂದರಲ್ಲಿ ಹಾ ಹೂ ಎಂದು ಕೂಗುತ್ತಾ ಮೈಯೆಲ್ಲವೂ ಸಡಿಲವಾಗುವಂತೆ ಕಸರತ್ತು ಮಾಡುತ್ತಿದ್ದ ಮಹಿಳೆಯರ ಗುಂಪಿನತ್ತ ನಡೆದರು.
ನಾನೂ ಅವರನ್ನು ಹಿಂಬಾಲಿಸಿದೆ. ಅವರು ಹಠಾತ್ತನೆ ನನ್ನನ್ನು ನೋಡಿ, ನನ್ನನ್ನು ಗುರುತು ಹಿಡಿದು ಚೆನ್ನಾಗಿದ್ದೀರಾ ಎಂದರು. ಎರಡು ಮೂರು ತಿಂಗಳ ಹಿಂದೆ ಆಸ್ಪತ್ರೆಯೊಂದರ ಉದ್ಘಾಟನೆ ನೋಡಲು ಹೋದ ನನ್ನನ್ನು ಕೂಡ ಆ ಕಾರ್ಪೋರೇಟರ್ ಜೊತೆಗೆ ದೀಪದ ಬತ್ತಿಯೊಂದನ್ನು ಹೊತ್ತಿಸಿ, ಉದ್ಘಾಟನೆ ಮಾಡುವಂತೆ ಮಾಡಿದ್ದರು ನನ್ನ ಗೆಳೆಯ ದಂಪತಿ. ಅಂದು ಅವರೊಂದಿಗಿದ್ದ ನನ್ನನ್ನು ಅವರು ಇಂದು ಗುರುತಿಸಿದ್ದು ನನ್ನ ಪುಣ್ಯವಿಶೇಷವೇ ಸರಿ. ಏಕೆಂದರೆ ನಾನೇನೂ ತಕ್ಷಣ ಗುರುತು ಹಿಡಿಯುವಂತಹ ಜನಪ್ರಿಯ ವ್ಯಕ್ತಿಯೇನಲ್ಲ.
ಕಾರ್ಪೋರೇಟರ್ ಅವರಿಗೆ ಅಲ್ಲಿದ್ದ ಹೆಂಗಸರು ಮಂಟಪವನ್ನು ಕಟ್ಟಿಸಿದ್ದಕ್ಕೆ, ಬೆಂಚುಗಳನ್ನು ಹಾಕಿಸಿದ್ದಕ್ಕೆ ಧನ್ಯವಾದ ಹೇಳಿದಾಗ, ಒಬ್ಬ ವಯಸ್ಸಾದ (ಬೈಯಬೇಡಿ. ಇದೊಂದು ಹೋಲಿಕೆಯ ಪದ!) ಮಹಿಳೆ ‘ಸಾರ್, ಎಲ್ಲಾ ಓಕೆ. ಟಾಯೆಟ್ ಇಲ್ಲ ಯಾಕೆ?’ ಎಂದರು. ಹೌದು, ಆ ಪಾರ್ಕ್‍ನಲ್ಲಿ ಟಾಯ್ಲೆಟ್ ಇಲ್ಲ. ಟಾಯ್ಲೆಟ್ ಬೇರೆಡೆ ಇದೆಯಾ?
ನನಗೆ ತಿಳಿಯದು. ಆದರೆ ಈ ಮಹಿಳೆಯ ತರ್ಕ ಬಹಳ ಚೆನ್ನಾಗಿತ್ತು. ‘ನಾವು ವಯಸ್ಸಾದವರು ಅರ್ಜೆಂಟಾಗಿ ಬಾತ್‍ರೂಮಿಗೆ ಹೋಗಬೇಕೆಂದರೆ ಬಹಳ ಕಷ್ಟ. ದಯವಿಟ್ಟು ಬಾತ್‍ರೂಮಿಗೆ ವ್ಯವಸ್ಥೆ ಮಾಡಿ’ ಎಂದರು.
ಹೌದಲ್ಲವೇ? ಮನೆಯಿಂದ ಪಾರ್ಕ್ ದೂರವಿದ್ದರೆ, ಈ ಛಳಿಗಾಲದಲ್ಲಿ ಗಡಗಡ ನಡುಗುವಾಗ ಮೂತ್ರಶಂಕೆ ಬೇಗ ಬೇಗನೆ ಆಗುತ್ತದೆ. ಆಗ ಮನೆಗೆ ಓಡಲು ವಯಸ್ಸು ಅಡ್ಡ ಬರುತ್ತದೆ.
ನನಗೆ ನನ್ನ ಮೈಸೂರು ಸಾಹಿತ್ಯ ಸಮ್ಮೇಳನದ ನೆನಪು ಆಗಿದ್ದರಲ್ಲಿ ಅಚ್ಚರಿಯೇನಿರಲಿಲ್ಲ.
ಪ್ರಕೃತಿಯ ಕರೆಗೆ ತುರ್ತಾಗಿ ಓಗೊಡಬೇಕಾದಾಗ ಓಡಬೇಕಾಗುತ್ತಿತ್ತು. ಏಕೆಂದರೆ ಬಾತ್‍ರೂಮ್‍ಗಳು ಸುಮಾರು ಎರಡು ಮೂರು ಫರ್ಲಾಂಗಿನಾಚೆ ಇದ್ದವು. ಅಲ್ಲಿಗೆ ಓಡುವ ಹೊತ್ತಿಗೆ ಪ್ಯಾಂಟ್ ಒದ್ದೆಯಾಗಿದ್ದರೂ ಅಚ್ಚರಿಯಿರುತ್ತಿರಲಿಲ್ಲ.
ಹಾಗೇ ಒಂದು ದಿನ ಅವಸರವಸರವಾಗಿ ಅವಸರ ತೀರಿಸಿಕೊಳ್ಳಲು ಓಡುತ್ತಿದ್ದೆ. ಆಗ ಒಬ್ಬ ಯುವಕ ಟಕ್ಕನೆ ನನ್ನ ಭುಜ ಹಿಡಿದು ನಿಲ್ಲಿಸಿ, ‘ನೀವು ಯತಿರಾಜ್ ವೀರಾಂಬುಧಿ ಅವರಲ್ವಾ?’ ಎಂದ.
ನನಗೆ ಒಂದು ಕಡೆ ಖುಷಿ, ಯಾರೋ ಗುರುತಿಸಿದರು ಎಂದು. ಮತ್ತೊಂದು ಕಡೆ ಅವಸರ. ಮೂರನೆಯ ಕಡೆ ಈ ಸಮ್ಮೇಳನದವರು ಯಾಕೆ ಅತ್ಯವಶ್ಯಕವಾದ ಬಾತ್‍ರೂಮನ್ನು ದೂರವಾಗಿ ಕಟ್ಟಿದ್ದಾರೆ ಎನ್ನುವ ಕೋಪ.
‘ಹೌದು’ ಎಂದು ಒಂದು ನಗೆ ಬೀರಿ ಅವರಿಂದ ಬಿಡಿಸಿಕೊಂಡು ಓಡಿದೆ. ಅಬ್ಬಾ... ಆ ಬಾತ್‍ರೂಮ್‍ಗಳು ವ್ಯಾ... ಕೊನೆಗೆ ರೈಲ್ವೇ ಕಂಬಿಗಳ ಬಳಿ ಇದ್ದ ಬಟಾಬಯಲಿನಲ್ಲಿ ಮೂತ್ರಶಂಕೆ ತೀರಿಸಿಕೊಂಡು ಬಂದೇನ್ನಿ.
ಇನ್ನೊಮ್ಮೆ ಮಹಾರಾಜ ಕಾಲೇಜಿನ ಕಕ್ಕಸು ಸಮುಚ್ಚಯಗಳಿಗೆ ಹೋಗಿ ಜೀವ ಹೌಹಾರುವುದೊಂದೇ ಬಾಕಿ!
ಈ ನಿಲುಮೆ ಓದುವವರಿಗೆಲ್ಲಾ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು!


Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102