14


14-1-2018
ನನ್ನ ಮಗ ಸಿಕ್ಕಾಪಟ್ಟೆ ಪುಸ್ತಕಗಳನ್ನು ಓದುತ್ತಿದ್ದ. ಅವನಿಗೆ ದ ಡಾವಿಂಚಿ ಕೋಡ್ ಬಹಳ ಇಷ್ಟವಾಗಿಬಿಟ್ಟಿತು. ಈಗೆಲ್ಲಾ ನಾನು ಯಾವುದಾದರೂ ಪುಸ್ತಕ ಓದಬೇಕೆಂದರೆ ಅದು ನನ್ನ ಮಗನ ರೆಕಮೆಂಡೇಷನ್ ಆಗಿರುತ್ತದೆ. ಯಾವುದಾದರೂ ಭಾಷೆಯ ಯಾವುದಾದರೂ ಸಿನಿಮಾ, ಆಂಗ್ಲ ಧಾರಾವಾಹಿ ಎಲ್ಲವೂ ಅವನದೇ ಶಿಫಾರಸ್ಸು!
ಕೆಲವೊಮ್ಮೆ ಹೊಸ ಹಿಂದೀ ಸಿನಿಮಾಗಳ ಟ್ರೈಲರ್‍ಗಳನ್ನು ನನಗೆ ಕಳಿಸಿ (ಪ್ರಸ್ತುತ ಅಮೆರಿಕದಲ್ಲಿ ಕೆಲಸದಲ್ಲಿದ್ದಾನೆ) ಫೋನ್ ಮಾಡಿದಾಗ ‘ನೋಡಿದಿರಾ?’ ಎಂದು ರಿಮೈಂಡ್ ಬೇರೆ ಮಾಡುತ್ತಾನೆ!
ಡಾವಿಂಚಿ ಕೋಡ್ ಓದಿದ. ಬಹಳ ಇಷ್ಟವಾಯಿತು ಅವನಿಗೆ. ನಾನು ಸಿನಿಮಾ ನೋಡಲು ಹೊರಟೆ. ಏಕೆಂದರೆ ಕರ್ಮವೀರ ಪತ್ರಿಕೆಗೆ ಲೇಖನ ಬರೆಯಬೇಕಿತ್ತು.
ನಾನೂ ಬರ್ತೀನಿ ಎಂದ.
ಮಗನೇ ನಿನಗಿನ್ನೂ ಹದಿನೇಳು ವರ್ಷಗಳು. ಪಿವಿಆರ್‍ನಲ್ಲಿ ಒಳಗೆ ಬಿಡೋದಿಲ್ಲ. ಇದು ವಯಸ್ಕರಿಗೆ ಮಾತ್ರ ಸಿನಿಮಾ ಎಂದೆ.
ಕೇಳಬೇಕಲ್ಲ! ನನಗೆ ಗೊತ್ತಿಲ್ಲ, ನನ್ನನ್ನು ಕರೆದುಕೊಂಡು ಹೋಗು ಎಂದು ಒಂದೇ ಹಟ.
ಸರಿ, ನಿಟ್ಟುಸಿರುಬಿಟ್ಟು ನನ್ನ ತಂಗಿಯ ಮನೆಗೆ ಹೋದೆ. ಅಂದಿಗೆ ಸರಿಯಾಗಿ ನನ್ನ ಚಿಕ್ಕ ತಂಗಿಯ ಮಗನಿಗೆ ಹದಿನೆಂಟು ವರ್ಷಗಳು ತುಂಬಿದ್ದವು. ತಂಗಿಯನ್ನು ಕೇಳಿ, ಅವಳ ಮಗನ ಜನನ ಪ್ರಮಾಣಪತ್ರವನ್ನು ಜೇಬಿಗೆ ಹಾಕಿಕೊಂಡೆ.
ನಾನು, ನನ್ನ ಮಗ ಸಿನಿಮಾಗೆ ಹೋದೆವು. ಟಿಕೆಟ್ ಪಡೆದು ಇನ್ನೇನು ಚಿತ್ರಮಂದಿರ ಪ್ರವೇಶಿಸಬೇಕು, ಆಗ ಬಾಗಿಲಲ್ಲಿ ನಮ್ಮ ಟಿಕೆಟ್ ಕತ್ತರಿಸಿದಾತ, ‘ಇವರಿಗೆ ಹದಿನೆಂಟು ಆಗಿಲ್ಲ, ಬಿಡುವುದಿಲ್ಲ’ ಎಂದ!
ನಾನು ನನ್ನ ದೇಶಾವರಿ ನಗೆ ಬೀರಿ, ‘ನನಗ್ಗೊತ್ತಿತ್ತು ನೀವು ಹೀಗೆ ಹೇಳೇ ಹೇಳ್ತೀರೀಂತ. ಅದಕ್ಕೇ ಅವನ ಬರ್ತ್ ಸರ್ಟಿಫಿಕೇಟ್ ತಂದಿದ್ದೀನಿ. ಇವತ್ತೇ ಅವನಿಗೆ ಹದಿನೆಂಟಾಯ್ತು ನೋಡಿ’ ಎಂದು ಜನನ ಪ್ರಮಾಣಪತ್ರ ತೋರಿಸಿದೆ.
ಒಳಗೆ ಬಿಡದೇ ಅವನಿಗೆ ನಿರ್ವಾಹವಿಲ್ಲದೇ ಹೋಗಿತ್ತು!
ಚಿಕ್ಕಂದಿನಲ್ಲಿ ನಮಗೆ ಸಿನಿಮಾ ಎಂದರೆ ಬಹಳ ಖುಷಿ. ನಿಜ ಹೇಳಲಾ? ನಾನು ಎಂದಿಗೂ ಸಿನಿಮಾಗೆ ಹೋದಾಗ ಏನೂ ನಿರೀಕ್ಷೆ ಇಟ್ಟುಕೊಳ್ಳದೇ ಹೋಗ್ತೇನೆ. ಪ್ರತಿ ಕ್ಷಣವನ್ನೂ ಎಂಜಾಯ್ ಮಾಡ್ತೇನೆ. ಎಲ್ಲ ಸಿನಿಮಾಗಳಲ್ಲೂ ಏನಾದರೊಂದು ಒಳ್ಳೆಯ ಅಥವಾ ನಮಗಿಷ್ಟವಾದ ದೃಶ್ಯ ಇದ್ದೇ ಇರುತ್ತದೆ. ಅದನ್ನು ನೋಡಿ ಆನಂದಿಸಬೇಕೇ ಹೊರತು, ಇನ್ನೂ ಅರ್ಧ ಸಿನಿಮಾ ನೋಡಿ ಇಂಟರ್‍ವಲ್‍ನಲ್ಲಿ ಮೊಬೈಲ್ ತೆಗೆದು, ನೆಟ್ ಆನ್ ಮಾಡಿ, ‘ಡಬ್ಬಾ ಸಿನಿಮಾ ಮೊದಲ ಅರ್ಧಾನೇ. ಇನ್ನು ದೇವರೇ ಗತಿ’ ಎಂದು ಟ್ವಿಟರ್‍ನಲ್ಲೋ, ಫೇಸ್‍ಬುಕ್‍ನಲ್ಲೋ, ವಾಟ್ಸ್ಯಾಪ್ ಗ್ರೂಪಿನಲ್ಲೋ ಬರೆಯುವುದು, ಅದಕ್ಕೆ ಪ್ರತಿಕ್ರಿಯೆ ‘ಅಬ್ಬಾ, ನನ್ನ ಸಾವಿರ ರೂಪಾಯಿ ಉಳಿಸಿದಿರಿ’ ಎಂದು ಕೆಲವರು.
ಕಷ್ಟಪಟ್ಟು ಸಿನಿಮಾ ಮಾಡಿದವರು ಜನ ನೋಡದಿದ್ದರೆ ದುಃಖಿಸುತ್ತಾರೆ. ನಷ್ಟವೂ ಆಗುತ್ತದೆ ಅವರಿಗೆ.
ಹೌದೂ, ನನಗೆ ಇಷ್ಟ ಇಲ್ಲ ಎಂದು ಬರೆದರೆ, ಅದು ನಿನಗೆ ಇಷ್ಟ ಆಗುವುದಿಲ್ಲ ಎಂದು ಏನು ಗ್ಯಾರಂಟಿ? ಅಲ್ವಾ?
ಕಿಶೋರಾವಸ್ಥೆಯಲ್ಲಿ ಒಮ್ಮೆ ಹೋದಾಗ ಸಹನಟಿ ಕೊಮಿಲ್ಲಾ ವಿರ್ಕ್ ಸಮುದ್ರ ತೀರಕ್ಕೆ ಬಂದು ಅವಳ ಕೋಟ್ ಬಿಚ್ಚಿ ಮರಳ ಮೇಲೆ ಸ್ಟೈಲಾಗಿ ಹಾಕಿ, ನೀರಿಗೆ ಇಳಿಯುತ್ತಾಳೆ. ನಾವು ‘ಅಬ್ಬಾ, ನಾವು ಟಿಕೆಟ್‍ಗೆ ಖರ್ಚು ಮಾಡಿದ ಹತ್ತು ರೂಪಾಯಲ್ಲಿ ಎರಡು ರೂಪಾಯಿ ವಾಪಸ್ ಬಂದ್ಹಂಗಾಯ್ತು’ ಎಂದುಕೊಳ್ಳುತ್ತಿದ್ದೆವು! ಅದು ಸಿನಿಮಾ ನೋಡುವ ರೀತಿ!!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102