12

12-1-2018
ಹಿಂದೆಲ್ಲಾ ಸಿನಿಮಾ ಎಂದರೆ ಹುಚ್ಚು. ಈಗ ಇಲ್ಲ ಎಂದಲ್ಲ, ಹುಚ್ಚು ಕಡಿಮೆ ಆಗಿದೆ!!
ನಾನು ಹತ್ತನೇ ತರಗತಿಯಲ್ಲಿದ್ದಾಗ ಒಂದು ಸಿನಿಮಾ ಬಂದಿತ್ತು. ಹಿಂದೀ ಭಾಷೆಯದು. ಅಷ್ಟು ಹೊತ್ತಿಗೆ ನಾನು ಆರಾಧನಾ ಚಿತ್ರವನ್ನು ನೋಡಿ ಆಗಿತ್ತು. ಬೆಂಗಳೂರು ಸಂಗಂ ಥಿಯೇಟರ್‍ನಲ್ಲಿ... (ಈಗ ಅದು ಇಲ್ಲ. ಧರ್ಮಾಂಬುಧಿ ಕೆರೆ ಎದುರಿಗೆ.... ಸುಭಾಷ್‍ನಗರದ ಎದುರಿಗೆ... ಬಸ್‍ಸ್ಟಾಂಡ್ ಕಣ್ರೀ) ನಾನು ನನ್ನ ತಂಗಿ, ನನ್ನ ದೊಡ್ಡಮ್ಮನ ಮಗಳು ಹೋದ ಹಾಗೆ ನೆನಪು. ನನಗಿಂತ ಒಂದು ವರ್ಷ ಚಿಕ್ಕವಳು ನನ್ನ ದೊಡ್ಡಮ್ಮನ ಮಗಳು. ಅವಳಿಗಿಂತ ಒಂದು ವರ್ಷ ಚಿಕ್ಕವಳು ನನ್ನ ದೊಡ್ಡ ತಂಗಿ. ನನಗಾಗ ಹನ್ನೆರಡು ವರ್ಷಗಳು!
ನನ್ನ ದೊಡ್ಡಪ್ಪ ರೈಲ್ವೇಯಲ್ಲಿ ಕೆಲಸದಲ್ಲಿದ್ದರು. ಅವರ ಮನೆ ಸ್ಟೇಷನ್ ಎದುರಿಗಿನ ಕ್ವಾರ್ಟರ್ಸ್‍ನಲ್ಲಿತ್ತು. ಕಲ್ಲಿನ ಮನೆ ಆಗ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಬಗ್ಗೆ ನಾನು ಹೇಳ್ತಿರೋದು.
ಹ್ಞಾಂ... ಆಗ ಆರಾಧನಾ ನೋಡಲು ಮನೆಯಿಂದ ಹೊರಗೆ ಬಂದು ತೋಟದಪ್ಪನ ಛತ್ರದ ರಸ್ತೆ ದಾಟಿ, ಸುಭಾಷ್‍ನಗರದ ನಡುವಿನ ರಸ್ತೆಯಲ್ಲಿ ನಡೆದು ಟ್ಯಾಂಕ್‍ಬಂಡ್ ರಸ್ತೆಗೆ ಬಂದರೆ ಅಲ್ಲೇ ಸಂಗಂ ಥೇಟರ್ರು.
ಈಗ ಮೈಸೂರಿಗೆ ಬರೋಣ. ಒಂದೊಳ್ಳೆಯ ಸಿನಿಮಾ ಬಂದಿತ್ತು. ಅಮ್ಮನನ್ನು ಕೇಳಿದೆ. ನೋಡೋಣ ಎಂದುಬಿಟ್ಟರು. ಅವರ ಹಿಂದೀ ಸಿನಿಮಾ ಗೆಳತಿ ಪದ್ಮ ಅವರ ಮನೆಗೆ ಹೋಗಿ ಅವರನ್ನು ‘ಅಮ್ಮ, ನಿಮ್ಮನ್ನು ಈವತ್ತು ಸಿನಿಮಾಗೆ ಬರಹೇಳ್ತಿದ್ದಾರೆ. ಹೋಗಕ್ಕೆ ಆಗತ್ತಾ?’ ಎಂದೆ. ಅವರ ಮನೆ ನಮ್ಮ ಮನೆಯ ಹಿಂದಿನ ರಸ್ತೆಯಲ್ಲಿತ್ತು.
ನಮ್ಮ ಮನೆಯ ಹಿಂದೆ ಕನ್ಸರ್ವೆನ್ಸಿ. ಅದಾದ ನಂತರ ಒಂದು ಲೈನು ಮನೆ. ಆಮೇಲೆ ರಸ್ತೆ. ರಸ್ತೆಯ ಆ ಬದಿಯಲ್ಲಿ ಪದ್ಮ ಮಾಮಿಯ ಮನೆ. ಅವರ ಮಗ ನನ್ನ ಸಹಪಾಠಿ. ಅವರ ಮಗಳು ನನ್ನ ತಂಗಿಯ ಸಹಪಾಠಿ. ಸಂಜೆ ಎಲ್ಲರೂ ಒಟ್ಟಿಗೇ ಆಡುತ್ತಿದ್ದ ಕಾಲವದು.
ಮತ್ತೆ ಮನೆಗೆ ಬಂದೆ. ‘ಅಮ್ಮಾ, ಪದ್ಮ ಮಾಮಿ ನಿನ್ನನ್ನು ಸಿನಿಮಾಗೆ ಬರಲು ಸಾಧ್ಯವಾ ಎಂದು ಕೇಳಿದರು’ ಎಂದೆ. ಅಮ್ಮ ಒಂದು ಕ್ಷಣ ಯೋಚಿಸಿ, ಸರಿ ಎಂದು ಸಿದ್ಧರಾದರು.
ಸಿನಿಮಾ ನೋಡಿ ಬಂದ ಮೇಲೆ ‘ಹೇಗಿದೆ ಸಿನಿಮಾ? ನಾನೂ ಹೋಗಬೇಕು’ ಎಂದೆ.
‘ನಿನ್ನ ಉಪಾಯ ನನಗೆ ತಿಳಿದುಬಿಟ್ಟಿತು. ನೀನೂ ಹೋಗೋಕ್ಕೆ ಈ ಪ್ಲಾನ್ ಮಾಡಿದ್ದೀ. ನೀನು ಹೋಗೋ ಹಾಗಿಲ್ಲ. ಚಿಕ್ಕ ಮಕ್ಕಳು ನೋಡಲು ಚೆನ್ನಾಗಿಲ್ಲ’ ಎಂದುಬಿಟ್ಟರು.
ಛೇ! ನಾನೇ ಹೋಗಿಬಿಡಬೇಕಿತ್ತು. ಅವರನ್ನು ಕಳಿಸಿದ್ದೇ ತಪ್ಪಾಯಿತು ಎಂದುಕೊಂಡು ದುಃಖಿಸಿದೆ.
ಆಮೇಲೆ ಯಾವಾಗಲೋ ಯೂಟ್ಯೂಬ್‍ನಲ್ಲಿಯೋ, ಇಲ್ಲ ಮಾರ್ನಿಂಗ್ ಷೋಗೋ ಹೋಗಿದ್ದೆ.
ರಾಖಿಯ ಒಂದು ಬಲಾತ್ಕಾರದ ದೃಶ್ಯ, ಜಯಶ್ರೀ ಟಿ. ಕ್ಯಾಬರೇ ನೃತ್ಯ ರೇಷಮೀ ಉಝಾಲಾ ಹೈ ಮಕ್ಮಲೀ ಅಂಧೇರಾ ಆ ಸಿನಿಮಾದ ಹೈಲೈಟುಗಳು! ನನ್ನಮ್ಮ ಅವೆರಡು ದೃಶ್ಯಗಳಿವೆಯೆಂದು ನನ್ನನ್ನು ಆ ಸಿನಿಮಾ ನೋಡಲು ಬಿಡಲಿಲ್ಲ!
ಖಿಲತೇಹೈ ಗುಲ್ ಯಹಾಂ, ಆಜ್ ಮಧೋಶ್ ಹುವಾ ಜಾಯೇರೇ, ರೇಷಮೀ ಉಝಾಲಾ ಹೈ, ಮೇಘಾ ಛಾಯೇ ಆಧೀ ರಾತ್ ಬೈರನ್ ಬನ್‍ಗಯೀ ನಿಂದಿಯಾ, ಓ ಮೇರಿ ಶರ್‍ಮಿಲೀ, ಕೈಸೆ ಕಹೇ ಹಂ ಪ್ಯಾರ್‍ನೆ ಹಮಕೋ ಕ್ಯಾ ಕ್ಯಾ ಖೇಲ್ ದಿಖಾಏ... ಅಬ್ಬಾ ಒಂದೊಂದು ಹಾಡೂ ಅದ್ಭುತ. ಈಗಲೂ ಕೇಳಲೇ ಚೆನ್ನಾಗಿವೆ!

Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102