11
11-1-2018
ಒಬ್ಬ ಮನುಷ್ಯನ ನಾನಾ ಮುಖಗಳನ್ನು ಇಂದು ನೋಡಿದ ಅನುಭವವಾಯಿತು. ಹೇಗಂತೀರಾ?
‘ನೀನೆಲ್ಲಿ ಹೋದೆ ಎಂದು ಹೇಳು, ಈ ಮತ್ತಿನ ರಾತ್ರಿಯಲ್ಲಿ’ ಎಂದು ಆರಂಭಿಸಿದ ಮನುಷ್ಯ ಎರಡು ನಿಮಿಷಗಳ ನಂತರ ‘ನಿನ್ನ ಮನೆಯ ಎದುರಿಗೆ ಒಂದು ಮನೆ ಕಟ್ಟುತ್ತೀನಿ’ ಎಂದ. ಅವಳು ‘ನೋಡೋಣ’ ಎಂದಳು.
ನಂತರ ಇದ್ದಕ್ಕಿದ್ದಂತೆ ಪ್ಲೇಟು ಬದಲಾಯಿಸಿ, ಮತ್ತೊಬ್ಬ ಹುಡುಗಿಯೊಂದಿಗೆ ‘ಹೃದಯ ಕೂಗಿದೆ ಬಾರಾ ಬಾರಾ’ ಎಂದ.
ಅವಳು ‘ನನ್ನೆಲ್ಲವನ್ನೂ ತೆಗೆದುಕೊಂಡು ನಿನ್ನೊಂದಿಗೆ ಬರುತ್ತೇನೆ’ ಎಂದಳು.
ಅಷ್ಟರಲ್ಲಿ ಅವನ ಮೂರನೆಯ ಪ್ರೇಮಿ, ‘ನಿನ್ನಂತಹ ಬಣ್ಣ ಬದಲಾಯಿಸುವ ಗೋಸುಂಬೆಯನ್ನು ಕಂಡೇ ಇಲ್ಲ. ನನ್ನೊಂದಿಗೆ ಹಳ್ಳಿಯಲ್ಲಿ ಏನೇನೋ ವಚನ ನೀಡಿ, ಈಗ ಇನ್ನೊಬ್ಬಳ ಬಾಹುಗಳೊಳಗೆ ಇದ್ದೀಯಲ್ಲಾ, ಇದು ನ್ಯಾಯವಾ?’ ಎಂದಳು.
ಅವನು ಅದಕ್ಕೆ ಸುಮ್ಮನೆ ಇದ್ದ. ಏಕೆಂದರೆ ಅವನ ಮನದಲ್ಲಿ ‘ರಾತ್ರಿ ಏಕಾಂಗಿ. ದೀಪಗಳು ಆರಿವೆ. ಹತ್ತಿರ ಬಂದು ನನ್ನ ಕಿವಿಗಳಲ್ಲಿ ಏನು ಬೇಕಾದರೂ ಹೇಳಿ’ ಎನ್ನುತ್ತಿದ್ದಳು!
ವಿಶೇಷವೆಂದರೆ ಇವೆಲ್ಲವೂ ಒಬ್ಬನೇ ನಾಯಕನ ಸಿನಿಮಾದ ಹಾಡುಗಳ ಮೊದಲ ಸಾಲುಗಳು!
ಯೂಟ್ಯೂಬ್‍ನಲ್ಲಿ ನವ್‍ಕೇತನ್ ಫಿಲ್ಮ್ಸ್ ಸಾಂಗ್ಸ್ ಅಂತ ಒಂದು ಫೈಲ್ ಇದೆ. ಅಬ್ಬಾ! ದೇವ್ ಆನಂದನ ನಿರ್ಮಾಣದ ಎಲ್ಲ ಸಿನಿಮಾಗಳ ಗೀತೆಗಳಿವೆ. ಮಧುರ ಗೀತೆಗಳು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಗೈಡ್, ಜ್ಯೂಯೆಲ್ ಥೀಫ್, ಪ್ರೇಮ್‍ಪೂಜಾರಿ... ಹೀಗೆ ಅದೆಂತಹ ಮಾಧುರ್ಯ.
ಹಸ್ತಾ ಹುವ ಬಚ್‍ಪನ್ ಹೈ ಎನ್ನುತ್ತಾಳೆ ವಹೀದಾ, ಲತಾಳ ಧ್ವನಿಯಲ್ಲಿ ಶೋಖಿಯೋಮೆ ಗೋಲಾ ಜಾಯೇ ಫೂಲೋಂಕಾ ಶಬಾಬ್...(ಪದಗಳು ತಪ್ಪಿದ್ದರೆ ತಿದ್ದಬಹುದು!)
ಹೌದು, ನನ್ನ ಬಾಲ್ಯವೂ ನಗೆ ತುಂಬಿದ್ದುದೇ. ನಿಜ ಹೇಳಬೇಕೆಂದರೆ ಹೆಚ್ಚಿನ ಆಸೆಗಳಿರಲಿಲ್ಲ. ಇದ್ದರೂ ಅವನ್ನು ತೀರಿಸಲು ಅಪ್ಪನ ಸಂಬಳ ಸಾಲುತ್ತಿರಲಿಲ್ಲ. ನನಗೆ ತಿಳಿದ ಮಟ್ಟಿಗೆ 1977ರಲ್ಲಿ ಅವರು ನಿವೃತ್ತಿ ಹೊಂದುವ ವೇಳೆಗೆ ಅವರ ಸಂಬಳ 777 ರೂಪಾಯಿಗಳು. ಅವುಗಳಲ್ಲಿ ನಮ್ಮ ಅಮ್ಮ ಅಚ್ಚುಕಟ್ಟಾಗಿ ಸಂಸಾರ ಮಾಡಿ, ಒಂದಿಷ್ಟು ಉಳಿಸುತ್ತಿದ್ದರು ಕೂಡ.
ನಾನು, ನನ್ನ ದೊಡ್ಡ ತಂಗಿ ಇಬ್ಬರ ನಡುವೆ ಕೇವಲ ಒಂದೂವರೆ ವರ್ಷಗಳ ಅಂತರ. ಒಡಹುಟ್ಟಿದವರ ಮೇಲಿನ ಹೊಟ್ಟೆಯುರಿ ನನಗೆ ಬೇಕಾದಷ್ಟಿತ್ತು. ನಾನು ಅವಳ ತಲೆಯನ್ನು ಗೋಡೆಗೆ ಬಡಿದಿರುವುದುಂಟು; ಮುಖವನ್ನು ಪರಚಿರುವುದೂ ಉಂಟು!
ಪಾಪ, ಎಲ್ಲವನ್ನೂ ಕ್ಷಮಿಸಿದ್ದಾಳೆ ನನ್ನ ಸಹೋದರಿ!
ಬೆಳಗ್ಗೆ ಏಳು ಗಂಟೆಗೆ ಸೈರನ್ ಹೊಡೆಯುತ್ತಿತ್ತು. ಎಲ್ಲರೂ ಕೆಲಸಗಳಿಗೆ ಓಡುತ್ತಿದ್ದರು. ನಮ್ಮ ತಂದೆ ಸ್ಟೇಷನ್ ತಲುಪಿ, ನಂಜನಗೂಡು ಕಡೆಯ ರೈಲು ಗಾಡಿಯಲ್ಲಿ ಎರಡನೆಯ ಸ್ಟೇಷನ್ ಆದ ಅಶೋಕಪುರಂ ತಲುಪಿ ಕೆಲಸಕ್ಕೆ ಹೋಗುತ್ತಿದ್ದರು.
ನಾನು ಕೂಡ 1974ರಲ್ಲಿ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸೇರಿದಾಗ ಕೆಲವು ಕಾಲ ಅವರೊಂದಿಗೆ ರೈಲಿನಲ್ಲಿ ಹೋಗಿ, ಅಶೋಕಪುರಂ ಇಳಿದು ಒಂದು ಕಿಮೀ ನಡೆದು ಕಾಲೇಜು ತಲುಪುತ್ತಿದ್ದೆ. ಎಲ್ಲರಿಗೂ ರೈಲಿನಲ್ಲಿ ಬರುವ ನನ್ನ ಕಂಡರೆ ಅಚ್ಚರಿ, ನಗು. ವಿಜಯಗೋಪಾಲ್ ಎನ್ನುವ ಮಲಯಾಳೀ ಸಹಪಾಠಿ ನನ್ನನ್ನು ‘ರೈಲ್ವೇ ಸ್ಟೇಷನ್ ಬಗ್ಗರ್’ ಎಂದೆನ್ನುತ್ತಿದ್ದ!
Comments
Post a Comment