10
10-1-2018
ಒಂದು ಚಿಕ್ಕ ಡಬ್ಬ ತೆಗೆದುಕೊಂಡು ಅದರೊಳಗೆ ಒಂದು ಕಲ್ಲನ್ನು ಹಾಕಿ, ಮುಚ್ಚಳ ಮುಚ್ಚಿ ಅದನ್ನು ಮಹಾಶಕ್ತಿವಂತನೊಬ್ಬ ಗರಗರನೆ ಆಡಿಸುತ್ತಿದ್ದರೆ, ಆ ಕಲ್ಲಿಗೆ ಜೀವವಿದ್ದರೆ ಅದಕ್ಕೆ ಹೇಗಿರುತ್ತಿತ್ತು?
ಕಲ್ಪಿಸಿಕೊಳ್ಳಲು ಕಷ್ಟ ಅಲ್ಲವೇ? ಇದು ಬಹಳ ಜನಗಳ ಪರಿಸ್ಥಿತಿಯೂ ಹೌದು. ನನ್ನದೂ ಇದಕ್ಕೆ ಅಪವಾದವೇನಲ್ಲ!
ಆದರೆ ಇಂತಹ ಒಂದು ಸನ್ನಿವೇಶವನ್ನು ಚಿತ್ರವೊಂದರಲ್ಲಿ ಕಂಡಿದ್ದೇನೆ. ಹೀಗೇ ಒಬ್ಬ ದೇಶಭಕ್ತ. ಅವನ ಕೈಗೆ ಸಿಕ್ಕಿ ಬೀಳುತ್ತಾನೆ ಒಬ್ಬ ದೇಶದ್ರೋಹಿ. ಈ ದೇಶದ್ರೋಹಿಗಳಿಗೆ ಮೊದಲು ಕೊಡುವ ತರಬೇತಿ ಏನು ಗೊತ್ತೇ? ಎಂತಹ ನೋವನ್ನಾದರೂ ತಡೆದುಕೊಳ್ಳುವ ಶಿಕ್ಷೆ. (ಅಮೆರಿಕದಂತಹ ದೇಶಗಳಲ್ಲಿ ಅವರ ಗೂಢಚಾರರಿಗೂ ಇಂತಹ ತರಬೇತಿ ಉಂಟಂತೆ).
ಈ ದೇಶದ್ರೋಹಿಗೆ ಗೂಢಚಾರಿ ಸಂಸ್ಥೆಯ ಒಬ್ಬ ಉದ್ಯೋಗಿ ಸಹಾಯ ಮಾಡುತ್ತಿರುತ್ತಾನೆ. ಅದಕ್ಕೇ ಈ ದೇಶದ್ರೋಹಿ ಸುಲಭವಾಗಿ ತಪ್ಪಿಸಿಕೊಳ್ಳುತ್ತಿರುತ್ತಾನೆ. ಆಗ ದೇಶಭಕ್ತನ ಕೈಗೆ ಸಿಕ್ಕಿಬಿದ್ದ ದೇಶದ್ರೋಹಿಗೆ ಆಗುವ ಶಿಕ್ಷೆ ನೋಡಿ.
ಅವನನ್ನು ಕಾರಿನ ಮುಂಭಾಗಕ್ಕೆ ಕಟ್ಟಿ, ಕಾರನ್ನು ಒಂದು ನಿರ್ಜನ ಪಾರ್ಕಿಂಗ್ ಸ್ಥಳದಲ್ಲಿ ವೇಗವಾಗಿ ಅಲ್ಲಿಂದ ಇಲ್ಲಿಗೆ ಓಡಿಸುತ್ತಾ, ಸರ್ರೆಂದು ತಿರುಗಿಸುತ್ತಾನೆ. ಆ ದೇಶದ್ರೋಹಿಯ ಕೈಗಳನ್ನು ಮಾತ್ರ ಕಟ್ಟಿ ಹಾಕಿರುವುದರಿಂದ ಅವನ ಇಡೀ ದೇಹ ಅತ್ತಿಂದಿತ್ತ ಅಲುಗಾಡಿ, ಅವನು ಚೀರಿ, ಬಾಯ್ಬಿಡಲು ಸಿದ್ಧನಾಗುತ್ತಾನೆ.
ಆದರೆ ನಾವು ನಮ್ಮ ಜೀವನದಲ್ಲಿ ಬಾಯಿ ಬಿಡಬೇಕಿಲ್ಲ. ಮನಸ್ಸನ್ನು ತೆರೆದುಕೊಳ್ಳಬೇಕು. ನಾವು ಎಂತಹ ಕಷ್ಟ ಬಂದರೂ ಎದುರಿಸುವ ಶಕ್ತಿಯನ್ನು ಪಡೆಯಬೇಕು. ನಮ್ಮೆಲ್ಲ ಶಕ್ತಿಯನ್ನೂ ಒಂದೆಡೆ ಕೂಡಿಸಿಕೊಂಡು ನಮ್ಮನ್ನು ಸಿಲುಕಿಸಿ ಹಾಕುವ ಪರಿಸ್ಥಿತಿ ಎದುರಾದಾಗ ಅದನ್ನು ವಾಪಸ್ಸು ಎದುರಿಸಬೇಕು.
ಸುಲಭದ ಕೆಲಸವಲ್ಲ, ಆದರೆ ಪ್ರಯತ್ನದಲ್ಲಿ ತಪ್ಪಿಲ್ಲ ಅಲ್ಲವೇ?
ಕೆಲವೊಮ್ಮೆ ಕೆಲವು ಕಷ್ಟಗಳು ಬಂದಾಗ ಅಯ್ಯೋ... ನನ್ನ ಜೀವನವೇ ಮುಗಿದು ಹೋಯಿತು ಎನ್ನಿಸುವುದುಂಟು. ಆದರೆ ಆ ಪ್ರಮಾದದ ಕ್ಷಣ ಮಾಯವಾದೊಡನೆ, ಅಯ್ಯೋ ಈ ವಿಷಯಕ್ಕೆ ಇಷ್ಟೊಂದು ಹೆದರಿದೆನಾ ಎನಿಸದಿರದು.
ಅನೇಕ ಸಲ ನಮಗೆ ಬೇಕಾಗಿರುವುದು ಸ್ಥಿತಪ್ರಜ್ಞತೆ. ಭಗವದ್ಗೀತೆಯ ಎರಡನೆ ಅಧ್ಯಾಯ ಸಾಂಖ್ಯಯೋಗದ 56ನೇ ಶ್ಲೋಕದಲ್ಲಿ ಗೀತಾಚಾರ್ಯ ಶ್ರೀಕೃಷ್ಣ ಇದನ್ನು ಬಹಳ ಚೆನ್ನಾಗಿ ವಿವರಿಸಿದ್ದಾನೆ.
ಖುಷಿ ಬಂದಾಗ ನಾವು ಎಗರಬೇಕಿಲ್ಲ. ಹಾಗೆಯೇ ದುಃಖ ಬಂದಾಗ ಕುಗ್ಗುವುದೂ ಬೇಕಿಲ್ಲ.
ನಮ್ಮ ಮೂರು ಶತ್ರುಗಳನ್ನು ಅವನು ಆಸೆ, ಕೋಪ ಮತ್ತು ಭಯ ಎನ್ನುತ್ತಾನೆ. ಇವು ಮೂರೂ ಇಲ್ಲದವನು ಮುನಿಗೆ ಸಮಾನ, ಸ್ಥಿತವಾದ ಪ್ರಜ್ಞೆಯಿರುವಾತ ಎನ್ನುತ್ತಾನೆ ಯೋಗೇಶ್ವರ.
ವಸ್ತು ಯಾ ಮನುಷ್ಯರಿಗಾಗಿ ಆಸೆ, ಅದು ಸಿಗದೇ ಹೋದರೆ ಎಂಬ ಭಯ, ಸಿಕ್ಕರೂ ಬೇರೆಯವರು ಕದಿಯುವರೆಂಬ ಭಯ ಮತ್ತು ಅವರ ಮೇಲೆ ಕೋಪ.
ಮೊದಲೆಲ್ಲಾ ನಾನು ಬಹಳವೇ ಶೀಘ್ರಕೋಪಿಯಾಗಿದ್ದೆ. ಸರ್ರೆಂದು ಕೋಪ ನೆತ್ತಿಗೇರಿ, ಕಿವಿಗಳು, ಕೆನ್ನೆಗಳು ಬಿಸಿಯಾಗಿ, ನಾಲಗೆಗೆ ಕಡಿವಾಣವಿಲ್ಲದ ಮಾತುಗಳು ಹೊರಬರುತ್ತಿದ್ದವು.
ಆದರೆ ಆ ಯತಿರಾಜ್ ಎಲ್ಲಿ ಈಗ ಎಂದು ಅನೇಕ ಸಲ ಹುಡುಕುವಂತಾಗುತ್ತದೆ!
Comments
Post a Comment