ಯತಿ ಸ್ವಂತೀ  

-1-

1-1-2018

ಚಿಂತೆಗಳ ಮೂಟೆ ಕಟ್ಟಿ, ಮನದ ಮೂಲೆಗೆ ಬಿಸಾಡಿ...

ಬೆಳಗ್ಗೆ ಬೆಳಗ್ಗೆ ವಾಕಿಂಗ್ ಹೋದಾಗ ಒಂದು ವಿಶಿಷ್ಟ ದೃಶ್ಯ ಕಣ್ಣಿಗೆ ಬಿದ್ದಿತ್ತು. ಪಾರ್ಕ್‍‌ನಲ್ಲೊಂದು ಮಂಟಪ. ಅದಕ್ಕೆ ವೃತ್ತಾಕಾರದ ಕಲ್ಲು ನೆಲಹಾಸು. ಐದು ಬೆಂಚುಗಳು. ಅವುಗಳ ಮೇಲೆ, ಅವುಗಳ ಸುತ್ತ ಅನೇಕ ಮಹಿಳೆಯರು. ಸುಮಾರು ಹದಿನೈದು ಜನ. ಮೂವತ್ತರಿಂದ ಅರವತ್ತರ ವರೆಗೂ ಇರಬಹುದು ವಯಸ್ಸು. (ಹೆಂಗಸರ ವಯಸ್ಸು ಕೇಳುವುದಿರಲಿ, ಅಂದಾಜು ಮಾಡುವುದೂ ‘ಅಪರಾಧ’!)

ಎಲ್ಲರೂ ತಮ್ಮ ಕೈಗಳನ್ನು, ಕಾಲುಗಳನ್ನು, ಸೊಂಟವನ್ನು, ಇಡೀ ದೇಹವನ್ನು ಹಾಗೆ ಹೀಗೆ ತಿರುಗಿಸುತ್ತಾ, ಹಾ, ಹೂ ಎಂದು ಗಂಟಲಿನಿಂದ ಶಬ್ದ ಹೊರಡಿಸುತ್ತಿದ್ದರು.

ಆ ಪಾರ್ಕ್‍ನಲ್ಲಿ ಅವರು ಮಾಡುತ್ತಿರುವ ಆ ಕಸರತ್ತು ಮಾತ್ರವೇ ಅವರ ಜೀವನಧ್ಯೇಯವೆಂಬಂತೆ ತೋರುತ್ತಿತ್ತು. ಎಲ್ಲರೂ ಗಲಗಲನೆ ಕಿರುಚುತ್ತಾ, ಒಬ್ಬರನ್ನೊಬ್ಬರು ನೋಡಿ ಮುಗುಳ್ನಗುತ್ತಾ ಇದ್ದುದು ನಿಜಕ್ಕೂ ಮುದ ತಂದ ದೃಶ್ಯ.

ವಿಶೇಷವೇನೆಂದರೆ, 2017ರ ಕೊನೆಯ ದಿನವೂ ಅದೇ ನೋಟ, 2018ರ ಮೊದಲ ದಿನವೂ ಅದೇ ನೋಟ.

ನಮ್ಮ ಬದುಕಿನಲ್ಲಿ ಏಕತಾನತೆ ಎನ್ನುವುದು ಒಂದು ವರ (ಶಾಪ?)  

ಕಾರ್ಖಾನೆಯೊಂದಕ್ಕೆ 22ನೇ ವಯಸ್ಸಿನಲ್ಲಿ ಸೇರಿದಾತ/ಕೆ ಕನಿಷ್ಠಪಕ್ಷ 35 ವರ್ಷಗಳ ಕಾಲ ಅದೇ ಬಸ್ಸು, ಅದೇ ರಸ್ತೆ, ಅದೇ ಕಾರ್ಖಾನೆ.

ಒಂದು ವೇಳೆ ನನ್ನಂತೆ ಸೇಲ್ಸ್ ಕೆಲಸಕ್ಕೆ ಸೇರಿದರೆ, ದಿನವೂ ಬೇರೆ ಬೇರೆ ಆಟೋ, ಹೊಸ ಹೊಸ ಡ್ರೈವರ್, ಮಾತುಗಳಲ್ಲಿ ವೈವಿಧ್ಯ, ದಿನವೂ ಬೇರೆ ಬೇರೆ ಬಡಾವಣೆ, ಬೇರೆ ಬೇರೆ ಗ್ರಾಹಕರು. ಒಮ್ಮೆ ಆಲೋಚಿಸಿದರೆ, ಅಯ್ಯೋ, ಇದು ಕೂಡ ಒಂದು ವಿನ್ಯಾಸವನ್ನು ಹೊಂದಿ, ಇಡೀ ವೃತ್ತಿಜೀವನದಲ್ಲಿ ಅದೇ ಏಕತಾನತೆ... ವೈವಿಧ್ಯದಲ್ಲಿ ಏಕತಾನತೆ.

ಹ್ಞಾಂ... ವಾಕಿಂಗ್ ಪಾರ್ಕ್‍‌ನ ಮಹಿಳೆಯರ ಬಳಿಗೆ ಮರಳೋಣ. ಕಿವಿಗಳಲ್ಲಿ ಲತಾ, ರಾಜ್, ರಫಿ, ಲತಾ, ಜಾನಕಿ, ಕಿಶೋರ್... ಇವರುಗಳ ಗಾನಮಾಧುರ್ಯವನ್ನು ಸವಿಯುತ್ತಾ, ನನ್ನ ರೌಂಡುಗಳು ನಡೆಯುತ್ತಿದ್ದಾಗ ಎಲ್ಲ ಹೆಂಗಸರ ಕೈಯಲ್ಲೂ ಒಂದೊಂದು ಕಾಗದದ ಪೊಟ್ಟಣವಿದ್ದು, ಅದರಿಂದ ಏನನ್ನೋ ತಮ್ಮ ಬಾಯಿಗಳಿಗೆ ಎಸೆದುಕೊಳ್ಳುತ್ತಿದ್ದರು. 

ನನ್ನ ಇಯರ್‍ಫೋನ್ ತೆಗೆದು ಈವ್ಸ್‌ಡ್ರಾಪ್‍ (ಅವರುಗಳು ಈವ್‍ಗಳಾದ್ದರಿಂದ ಈವ್ಸ್‌ಡ್ರಾಪ್ ಅನ್ನೋ ಪದ ಚೆನ್ನಾಗಿ ಹೊಂದಿಕೊಂಡಿದೆ ಅಲ್ವಾ!) ಮಾಡಿದೆ. 

ವರ್ಷದ ಮೊದಲ ದಿನವೆಂದು ಅವರಲ್ಲಿಯೇ ಒಬ್ಬಾಕೆ ಕಡಲೇಕಾಳು ಉಸಲಿ ಮಾಡಿಕೊಂಡು ಬಂದಿದ್ದರೆಂದು ತಿಳಿಯಿತು.

ನನ್ನ ರೌಂಡು ಮುಗಿಸಿ ಹೊರಬಂದೆ. ಇಯರ್‍ಫೋನ್ ತೆಗೆದು ಜೇಬಿನಲ್ಲಿಟ್ಟುಕೊಳ್ಳುತ್ತಿದ್ದಂತೆ, “ಆಯ್ತಲ್ಲಾ ರೇವತೀ, ಈವತ್ತಿನ ಜೀವನದ ಬದಲಾವಣೆ. ಇನ್ನು ಹೋಗಿ ಮಾಮೂಲಿ ಚಾಕರಿ ಮಾಡುವುದು ಇದ್ದೇ ಇದೆ” ಎಂದು ಒಬ್ಬಾಕೆ ಹೇಳಿದ್ದು ಕೇಳಿಸಿತು.

ರೇವತಿ, “ಇರಲಿ ಬಿಡೀ ಶಾಂತಮ್ಮಾ. ಇಷ್ಟು ಹೊತ್ತು ನಮ್ಮ ಚಿಂತೆಗಳನ್ನ ಮೂಟೆ ಕಟ್ಟಿ ಬಿಸಾಕಿದ್ದೆವಲ್ಲ, ಅಷ್ಟು ಬದಲಾವಣೆ ಸಾಕು ದಿನಾ. ನಾನೂ ನಮ್ಮೆಜಮಾನ್ರಿಗೆ ಅವರೇಕಾಳು ಹಾಕಿ ಅಕ್ಕಿರೊಟ್ಟಿ ಮಾಡಿಕೊಡಬೇಕು. ಬರ್ತೀನಿ” ಎಂದು ನಡೆದರು.

ಅಬ್ಬಾ! ಸುಂದರ ಆಲೋಚನೆ! ಸ್ವಲ್ಪ ಹೊತ್ತು ಚಿಂತೆಗಳನ್ನು ಮರೆತರೆ ಸಾಕು, ಮನದಲ್ಲಿನ ತುಯ್ತವು ಕಡಿಮೆಯಾಗಿ, ದೇಹವೂ ರಿಲ್ಯಾಕ್ಸ್ ಆಗಿ, ದಿನದ ಏಕತಾನತೆಗೆ ಸಿದ್ಧವಾಗಿ... ಆಹಾ...!

                          -0-0-0-



Comments

Popular posts from this blog

ಯತಿ ಸ್ವಂತೀ -86

ಯತಿ ಸ್ವಂತೀ -104

ಯತಿ ಸ್ವಂತೀ -102